 ಚೆಸ್ಟರ್‍ಟನ್, ಗಿಲ್ಬರ್ಟ್ ಕೀತ್
1874-1936. ಇಂಗ್ಲೆಂಡಿನ ಪತ್ರಿಕೋದ್ಯೋಗಿ, ಗ್ರಂಥಕರ್ತ, ವಿಮರ್ಶಕ, ವಾದಪಟು. ಅಲಂಕಾರಿಕ (ರೆಟರಿಕಲ್) ಕವಿಯಾಗಿ ಪ್ರಸಿದ್ಧಿ ಪಡೆದ ಸಾಹಿತಿ. ತುಂಬಿ ತುಳುಕುವ ಉತ್ಸಾಹ, ವಾಕ್‍ಚತುರತೆ ಮತ್ತು ಭೀಮಕಾಯದಿಂದ ಎಲ್ಲರ ಮನಸೆಳೆದ ಮೋಹಕ ವ್ಯಕ್ತಿ. ಜನನ, ಲಂಡನ್ನಿನಲ್ಲಿ, ಸೇಂಟ್ ಪಾಲ್ಸ್ ಶಾಲೆಯಲ್ಲಿ ಮೊದಲ ಶಿಕ್ಷಣ ಪಡೆದ. ಚಿಕ್ಕವಯಸ್ಸಿನಲ್ಲೇ ಇಂಗ್ಲಿಷ್ ಕಾವ್ಯರಚನೆಗೆ ಮಿಲ್ಟನ್ ಬಹುಮಾನ ಗಳಿಸಿದ (1890). ಕಲೆಯನ್ನೇ ವೃತ್ತಿಯಾಗಿ ಅನುಸರಿಸಬೇಕೆಂಬ ಆಸಕ್ತಿಯಿಂದ (1892-1895ರವರೆಗೆ) ಸ್ಲೇಡ್ ಶಾಲೆಯನ್ನು ಸೇರಿದ. ಅದೇ ಅವಧಿಯಲ್ಲಿ ಲಂಡನ್ನಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಅಭ್ಯಾಸಮಾಡಿದ. ಸಹಜ ಒಲವು ಇದ್ದುದು ಸಾಹಿತ್ಯದ ಕಡೆಗೆ. ಆಗ ಇವನಿಗೆ ಪರಿಚಯವಾದ ಅರ್ನೆಸ್ಟ್ ಹಾಡರ್ ವಿಲಿಯಮ್ಸ್ ಎಂಬಾತ ಸಾಹಿತ್ಯದಲ್ಲಿರುವ ಇವನ ಸಹಜ ಒಲವನ್ನು ಗುರುತಿಸಿ ಸಮರ್ಥ ಲೇಖಕನಾಗುವ ಶಕ್ತಿಯಿದೆಯೆಂದು ಭರವಸೆ ಕೊಟ್ಟ. ಅವನ ಒತ್ತಾಯದ ಮೇರೆಗೆ ಬುಕ್‍ಮನ್ ಪತ್ರಿಕೆಗೆ ಅನೇಕ ಪುಸ್ತಕಗಳನ್ನು ವಿಮರ್ಶೆ ಮಾಡಿ ತನ್ಮೂಲಕ ಚೆಸ್ಟರ್‍ಟನ್ ಪತ್ರಿಕಾವೃತ್ತಿಯಲ್ಲಿ ಅಡಿಯಿಟ್ಟ. 1900ರಲ್ಲಿ ದಿ ವೈಲ್ಡ್ ಎಂಬ ಒಂದು ಪದ್ಯಸಂಕಲನ ಪ್ರಕಟಿಸಿದ. ಅನಂತರ ಸ್ಪೀಕರ್ ಮತ್ತು ಡೆಯ್ಲಿನ್ಯೂಸ್ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯತೊಡಗಿದ. ಜಿ.ಕೇಸ್ ವೀಕ್ಲಿ ಎಂಬ ವಾರಪತ್ರಿಕೆಯ ಸಂಪಾದಕನಾದ. ಕೆಲವು ವರ್ಷ ಇಲಸ್ಟ್ರೇಟೆಡ್ ಲಂಡನ್ ನ್ಯೂಸ್ ಎಂಬ ಪತ್ರಿಕೆಯಲ್ಲಿ ಪ್ರತಿವಾರವೂ ಒಂದು ಪುಟದಷ್ಟು ಸಂಭಾಷಣ ರೂಪದ ಲೇಖನ ಬರೆದ.

ಶಾಲೆಯಲ್ಲಿದ್ದಾಗ ಇವನ ಬಗ್ಗೆ ಬಂದ (1892) ಒಂದು ವರದಿ ಹೀಗಿತ್ತು : ಚುರುಕು ಬುದ್ಧಿಯವನಲ್ಲ; ಆದರೆ ನಿಧಾನವಾಗಿ ಚಲಿಸುವ ವಕ್ರವಕ್ರವಾದ ಕಲ್ಪನಾಶಕ್ತಿಯುಳ್ಳವ. ನಡತೆ ಯಾವಾಗಲೂ ಮೆಚ್ಚುವಂಥದು. ಆದರೆ ಮುಂದೆ ಇವನ ವಿಚಾರದಲ್ಲಿ ಈ ಅಭಿಪ್ರಾಯ ಪೂರ್ತಿಯಾಗಿ ಸುಳ್ಳಾಯಿತು. ಒಮ್ಮೆ ಶಾಲೆಯ ಮುಖ್ಯೋಪಾಧ್ಯಾಯ ಚೆಸ್ಟರ್‍ಟನ್ನನ ತಾಯಿಗೆ ಹೀಗೆ ಹೇಳಿದರಂತೆ-ಆರಡಿ ಉದ್ದದ ಪ್ರತಿಭಾಶಾಲಿ. ಇವನನ್ನು ಸರಿಯಾಗಿ ಬೆಳೆಸು. ಈ ಭವಿಷ್ಯ ಮಾತ್ರ ನಿಜವಾಯಿತು. ವಾದ ವಿವಾದದಲ್ಲಿ, ಚರ್ಚೆಯಲ್ಲಿ, ಭಾಷಣ ಕಲೆಯಲ್ಲಿ, ಪತ್ರಿಕಾವೃತ್ತಿಯಲ್ಲಿ, ವಿಲಕ್ಷಣ ಕಟ್ಟುಕಥೆಗಳ ರಚನೆಯಲ್ಲಿ ಚೆಸ್ಟರ್‍ಟನ್ ಅತ್ಯಂತ ಹರಿತವಾದ ಬುದ್ಧಿಯಿಂದ ಜನರನ್ನು ಅಚ್ಚರಿಗೊಳಿಸಿದ. ಇವನ ಬುದ್ಧಿ ಎಷ್ಟು ವಿಚಿತ್ರವಾಗಿ ಕೆಲಸ ಮಾಡುತ್ತಿತ್ತೆಂದರೆ ವಿಕ್ಟೋರಿಯನ್ ಯುಗದ ಸಾಂಪ್ರದಾಯಿಕ ಹಳಸಲು ಉಕ್ತಿಗಳನ್ನು ವಿರೋಧಾಭಾಸದ ಅಸ್ತ್ರದಿಂದ ಈತ ತಲೆಕೆಳಗು ಮಾಡಿದ. ಅಂದಿನ ಸತ್ತ್ವಗುಂದಿದ ಮನೋಧರ್ಮವನ್ನು ಗೇಲಿ ಮಾಡಿದ. ಆಗಿನ ಕಾಲದ ನಿರಾಶಾವಾದಿಗಳನ್ನು (ದಿ ಡಿಫೆಂಡೆಂಟ್ ಎಂಬ ಪುಸ್ತಕದಲ್ಲಿ) ಖಂಡಿಸಿದ. ಕ್ರೈಸ್ತಧರ್ಮಶಾಸ್ತ್ರದ ಗಹನ ದ್ವಂದ್ವಾರ್ಥಗಳನ್ನು ಚುರುಕುಬುದ್ಧಿಯಿಂದ ಒಳಹೊಕ್ಕು ಶೋಧಿಸಿದಂತೆಲ್ಲ ಇವನ ವಿರೋಧೋಕ್ತಿ ಮಹತ್ತ್ವದ ಕೆಲಸ ಮಾಡತೊಡಗಿತು. ಇವನು ಸಾಂಪ್ರದಾಯಿಕತೆಯನ್ನು ಅಸಾಂಪ್ರದಾಯಿಕ ರೀತಿಯಲ್ಲಿ ಎಷ್ಟು ಚಮತ್ಕಾರವಾಗಿ ಪ್ರತಿಪಾದಿಸಿದನೆಂದರೆ ಇವನಿಗೆ ವಿರೋಧಾಭಾಸದ ಅಗ್ರಗಣ್ಯ ಎಂದು ಹೆಸರು ಬಂತು.

	ಇವನ ಮೊದಲ ಬರೆಹಗಳು (1910ರ ವರೆಗೆ) ಮೂರು ಮುಖ್ಯ ವಿಷಯಗಳಿಗೆ ಸಂಬಂಧಪಟ್ಟವು; 
(1) ಸಾಮಾಜಿಕ ವಿಮರ್ಶೆ - ಬಹು ಪಾಲು ಇವನ ಪತ್ರಿಕಾ ವಿಮರ್ಶೆಗಳಲ್ಲಿ ಹರಡಿ ಹೋಗಿದೆ. ದಿ ಡಿಫೆಂಡೆಂಟ್ (1901). ಟ್ವೆಲ್ವ್ ಟೈಪ್ಸ್ (1902). ಹೆರಿಟಿಕ್ಸ್-ಎಂಬವು ಕೆಲವು ಲೇಖನಗಳ ಸಂಕಲನಗಳು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಬೋಯರ್ ಯುದ್ಧದ ಬಗ್ಗೆ ಇವನ ಧೋರಣೆಗಳೂ ಅಭಿಪ್ರಾಯಗಳೂ ಕಟುವಾಗಿದ್ದುವು. ಅವು ಉಜ್ಜ್ವಲ ದೇಶಾಭಿಮಾನವುಳ್ಳವಾಗಿದ್ದರೂ ಅವುಗಳ ಸಹಾನುಭೂತಿ ಮಾತ್ರ ಬೋಯರ್ ಪರವಾಗಿತ್ತು. 1912ರಲ್ಲಿ ಮಾರ್ಕೊನಿ ಪ್ರಕರಣದಲ್ಲಿ ಈತ ರಾಜಕೀಯ ಅನಾಚಾರವನ್ನು ಖಂಡಿಸಿ ಬರೆದ ಲೇಖನ ತೀಕ್ಷ್ಣವಾಗಿತ್ತು. ತನ್ನ ಆತ್ಮಚರಿತ್ರೆಯಲ್ಲಿ ಬರುವ ದಿ ಕೇಸ್ ಎಗೇನ್‍ಷ್ಟ್ ಕರಪ್‍ಷನ್ ಎಂಬ ಅಧ್ಯಾಯದಲ್ಲಿ ಈತ ರಾಜಕೀಯ ಜೀವನದಲ್ಲಿ ನಿಷ್ಠೆ, ಪ್ರಾಮಾಣಿಕತೆಗಳ ಅವಶ್ಯಕತೆ ಬಗ್ಗೆ ಉಜ್ಜ್ವಲವಾಗಿ ಬರೆದಿದ್ದಾನೆ.

ಆರಂಭದಲ್ಲಿ ಇವನ ಒಲವು ತೀವ್ರಗಾಮಿ ಪಕ್ಷದ ಕಡೆ ಇದ್ದಿತು. ಸ್ವಲ್ಪಕಾಲದ ಮೇಲೆ (ಗೆಳೆಯನಾದ ಹಿಲೇರ್ ಬೆಲಾಕನ ಜೊತೆ) ಡಿಸ್ಟ್ರಿಬ್ಯೂಟಿಸ್ಟ್ ಪಂಥಕ್ಕೆ ಸೇರಿದ. ಇದರ ತತ್ತ್ವ ಬಹಳ ಸರಳವೆಂದೂ ಕೆಲವೇ ಶ್ರೀಮಂತರ ಸ್ವತ್ತಾದ ಭೂಮಿಯನ್ನು ಪುನಃ ಸ್ವಾಧೀನ ಪಡೆಯುವುದೇ ಇದರ ಉದ್ದೇಶವೆಂದೂ ಆ ಪಂಥದ ಧೋರಣೆಯನ್ನು ಎತ್ತಿ ಹಿಡಿದ. ಫ್ರಾನ್ಸಿಸ್ ಬೇಕನ್ ಪ್ರತಿಪಾದಿಸಿದ ಸೂತ್ರವನ್ನೇ ಈತ ಅನುಮೋದಿಸುತ್ತಾನೆ; ಹಣ ಗೊಬ್ಬರವಿದ್ದಂತೆ. ಅದನ್ನು ಹರಡದಿದ್ದರೆ ಒಳ್ಳೆಯದಲ್ಲ.
(2) ಸಾಹಿತ್ಯ ವಿಮರ್ಶೆ : ಇದು ಈತನ ಜೀವನದ ಎರಡನೆಯ ಆಸಕ್ತಿಯಾದರೂ ಈತ ಕೆಲವು ಉತ್ತಮ ಸಾಹಿತ್ಯ ವಿಮರ್ಶಾಕೃತಿಗಳನ್ನು ನೀಡಿದ್ದಾನೆ. ದಿ ಇಂಗ್ಲಿಷ್ ಮೆನ್ ಆಫ್ ಲೆಟರ್ಸ್ ಎಂಬ ಮಾಲೆಯಲ್ಲಿ ರಾಬರ್ಟ್ ಬ್ರೌನಿಂಗ್ ಕವಿಯನ್ನು ಕುರಿತು ಈತ ಸುದೀರ್ಘ ವಿಮರ್ಶೆಯನ್ನು ಬರೆದ (1903). ಬ್ರೌನಿಂಗ್ ಕವಿಯ ವ್ಯಕ್ತಿತ್ವ ಸಂಕೀರ್ಣತೆಯಿಂದಲೂ ವಿರೋಧಾಭಾಸದಿಂದಲೂ ಕೂಡಿದೆ. ಆ ಗುಣಗಳು ಹಾಗೆಯೇ ಈ ಕೃತಿಯಲ್ಲಿ ಪ್ರತಿಬಿಂಬಿತವಾಗಿವೆ. ಪ್ರಖ್ಯಾತ ಕಾದಂಬರಿಕಾರ ಚಾಲ್ರ್ಸ್‍ಸ್ ಡಿಕನ್ಸ್ ಬಗ್ಗೆ ಬರೆದ ವಿಮರ್ಶೆ (1906) ಇದಕ್ಕಿಂತಲೂ ಗಹನವಾದ ಕೃತಿ. ಅಪ್ರೀಸಿಯೆಷನ್ಸ್ ಅಂಡ್ ಕ್ರಿಟಿಸಿಸಮ್ಸ್ ಆಫ್ ಚಾಲ್ರ್ಸ್‍ಸ್ ಡಿಕನ್ಸ್ ಎಂಬ ಕೃತಿಯಲ್ಲಿ ಡಿಕನ್ಸ್‍ನ ಎಲ್ಲ ಕೃತಿಗಳಿಗೂ ಪ್ರತ್ಯೇಕವಾಗಿ ಪೀಠಿಕ ರೂಪದ ವಿಮರ್ಶೆಗಳನ್ನು ಈತ ಬರೆದಿದ್ದಾನೆ. ಡಿಕನ್ಸನನ್ನು ಮಾನವೀಯತೆ ಮತ್ತು ಅನುಕಂಪೆಯಿಂದ ಕೂಡಿದ ಶ್ರೇಷ್ಠ ಕಾದಂಬರಿಕಾರನೆಂದು ಮುಕ್ತಕಂಠದಿಂದ ಹೊಗಳಿದ್ದಾನೆ. ಪಿಕ್‍ವಿಕ್ ಪೇಪರ್ಸ್‍ನ ಘನತೆ ಕರುಣೆ; ಗ್ರೇಟ್ ಎಕ್ಸ್‍ಪೆಕ್ಟೇಷನ್ಸ್‍ನ ಶಾಂತ ವ್ಯಂಗ್ಯ-ಇವನ್ನು ಎತ್ತಿತೋರಿಸುವ ಇವನ ಮೆಚ್ಚಿಗೆ ವಿಮರ್ಶೆಗೆ ಅಪೂರ್ವ ಕೊಡುಗೆಗಳು. ಬರ್ನಾಡ್ ಷಾ (1909), ದಿ ವಿಕ್ಟೋರಿಯನ್ ಏಜ್ ಇನ್ ಲಿಟರೇಚರ್ (1930), ವಿಲಿಯಂ ಬ್ಲೇಕ್ (ಸ್ಟಡೀಸ್) 1910, ವಿಲಿಯಂ ಕಾಬೆಟ್ (1925) ಮತ್ತು ಆರ್.ಎಲ್.ಸ್ಟೀವನ್‍ಸನ್ (1927) ಇವರನ್ನು ಕುರಿತ ಇವನ ವಿಮರ್ಶೆಗಳಲ್ಲಿ ನಿರರ್ಗಳತೆ, ಸ್ವಚ್ಛಂದತೆ ಇದೆ. ಅನೇಕ ಪಂಡಿತ ಪ್ರಾಶಸ್ತ್ಯ ನೀಡಿದೆ. ಈ ಕೃತಿಗಳು ಇವನ ಒಲವು, ಅಭಿರುಚಿಗಳನ್ನು ವ್ಯಕ್ತಪಡಿಸುವ ವೈಯಕ್ತಿಕ ವಿಮರ್ಶೆಗೆ ನಿದರ್ಶನಗಳಾಗಿವೆ. ಅವುಗಳಲ್ಲಿ ಸಾಹಿತ್ಯ ವಿಮರ್ಶೆಗೆ ಸಂಬಂಧಪಟ್ಟಂತಗೆ ತಾತ್ತ್ವಿಕ ನೆಲೆಯಾಗಲಿ, ಮೌಲ್ಯಗಳ ಚಿಂತನೆಯಾಗಲಿ ಇಲ್ಲ. ತನ್ನ ಮನಸ್ಸಿನ ಮೇಲೆ ಸಾಹಿತ್ಯಕೃತಿಗಳು ಬೀರಿರುವ ಪ್ರಭಾವವನ್ನು ತನ್ನದೇ ಆದ ರೀತಿಯಲ್ಲಿ ಹೇಳಿರುವುದೇ ಇದರ ವೈಶಿಷ್ಟ್ಯ. ಸಾಹಿತ್ಯ ಕೃತಿಗಳನ್ನು ತೂಗಿ ನೋಡಬೇಕಾದರೆ ಅವಶ್ಯಕವಾದ ವಾಸ್ತವಾಂಶಗಳಿಗೂ ಆಕರಗಳಿಗೂ ಇವನು ನಿರ್ಲಕ್ಷ ತೋರಿದ. ಆದರೂ ಸೇಂಟ್ ತಾಮಸ್ ಅಕ್ವಿನಸ್‍ನ ಬಗೆಗಿನ ಇವನ ಕೃತಿ ಅತ್ಯಂತ ಮೆಚ್ಚಿಗೆಗೆ ಪಾತ್ರವಾಗಿದೆ. ಈ ಮಹಾಚೇತನ ಇವನ ಮೇಲೆ ಹೇಗೆ ಪ್ರಭಾವ ಬೀರಿತೆಂಬುದನ್ನು ತೋರಿಸಿರುವುದೇ ಇದರ ಸೊಗಸು.
(3) ಇವನ ಮೂರನೆಯ ಮುಖ್ಯ ಆಸಕ್ತಿ ಮತಶಾಸ್ತ್ರ ಮತ್ತು ಧಾರ್ಮಿಕ ವಿಚಾರಗಳ ಬಗೆಗಿನ ಚರ್ಚೆ. 1922ರಲ್ಲಿ ಚೆಸ್ಟರ್‍ಟನ್ ರೋಮನ್ ಕ್ಯಾಥೊಲಿಕ್ ಚರ್ಚಿಗೆ ಸೇರಿಕೊಂಡ. ಈ ಪ್ರಸಂಗ ಚೆಸ್ಟರ್‍ಟನ್ನನ ರೋಮನ್ ಕ್ಯಾತೋಲಿಕ್ ಚರ್ಚಿಗೆ ಸೇರಿಕೊಂಡ. ಈ ಪ್ರಸಂಗ ಚೆಸ್ಟರ್‍ಟನ್ನನ ಧಾರ್ಮಿಕ ಮತ್ತು ಸಾಮಾಜಿಕ ವಾದವಿವಾದಗಳಿಗೆ ಒಂದು ತೀಕ್ಷ್ಣತೆಯನ್ನು ಸ್ವಾರಸ್ಯವನ್ನೂ ಕೊಟ್ಟಿದೆ. ಇವನು ಕ್ಯಾಥೊಲಿಕ್ ಪಂಥಕ್ಕೆ ಸೇರಿದ ಫಲವಾಗಿ ಬರೆದ ಸೇಂಟ್ ಫ್ರಾನ್ಸಿಸ್ ಆಫ್ ಆಸಿಸಿ (1923) ಕುರಿತ ಗ್ರಂಥ ಯಾವ ವಾದವಿವಾದಗಳ ಕೋಲಾಹಲಕ್ಕೆ ಎಡೆಕೊಡದ ನಿರುದ್ವೇಗದಿಂದ ಕೂಡಿದ ಜೀವನ ಚರಿತ್ರೆಯಾಗಿದೆ.

ಕಾವ್ಯ, ಪ್ರಬಂಧ, ಸಣ್ಣಕತೆ ಮುಂತಾದ ಸಾಹಿತ್ಯ ಕೃತಿಗಳನ್ನು ನಿರ್ಮಿಸುವುದರಲ್ಲೂ ಚೆಸ್ಟರ್‍ಟನ್ ಶಕ್ತನಾಗಿದ್ದ. ಈ ಬಗೆಯ ಕೃತಿಗಳನ್ನು ಹೇರಳವಾಗಿ ಬರೆದದ್ದು ಇವನ ಸೃಜನಾತ್ಮಕ ಸಾಹಿತ್ಯ ಶಕ್ತಿಯ ದ್ಯೋತಕ. ಇವನು ಎರಡು ನಾಟಕಗಳನ್ನು ಬರೆದದ್ದುಂಟು. ಮೊದಲ ನಾಟಕವಾದ ಮ್ಯಾಜಿಕ್ ಎಂಬುದು ಬರ್ನಾಡ್ ಷಾನ ಒತ್ತಾಯದ ಮೇಲೆ ಬರೆದದ್ದು. ರಂಗದ ಮೇಲೆ ಅದು ಯಶಸ್ವಿಯಾಗಲಿಲ್ಲ. ಹಾಗೆಯೇ ದಿ ಜಜ್‍ಮೆಂಟ್ ಆಫ್ ಜಾನ್‍ಸನ್ ಕೂಡ ಹೆಚ್ಚು ಪರಿಣಾಮಕಾರಿಯಾಗಲಿಲ್ಲ. ಇವನ ಕಾವ್ಯ ನಿಜಕ್ಕೂ ಜನಪ್ರಿಯವಾಯಿತು. ಲಘುಧಾಟಿಯ ಕವನಗಳನ್ನು ಬರೆಯುವುದರಲ್ಲಿ ಅತ್ಯಂತ ಕುಶಲತೆಯನ್ನು ಈತ ಪ್ರದರ್ಶಿಸಿದ. ಇವನ ಕಾವ್ಯದಲ್ಲಿ ನಾವು ಕಾಣುವುದು ಚಮತ್ಕಾರ ಇಲ್ಲವೆ ಹಾಸ್ಯ. ಲಾವಣಿ ರೂಪದ ಕವನಗಳನ್ನು ಬರೆಯುವುದರಲ್ಲೂ ಈತ ಬಹಳ ಸಮರ್ಥ. ಲೆಪಾಂಟೊ, ಬ್ಯಾಲಡ್ ಆಫ್ ದಿ ಹ್ವೈಟ್ ಹಾರ್ಸ್, ದಿ ಸಾಂಗ್ ಆಫ್ ದಿ ಹ್ವೀಲ್ಸ್ ಎಂಬ ಕವನಗಳು ಈ ಮಾದರಿಗೆ ಉತ್ತಮ ನಿದರ್ಶನಗಳು. ದಿ ಫ್ಲೆಯಿಂಗ್ ಇನ್ ಎಂಬ ಕವನದಲ್ಲಿರುವ ಕುಡಿತದ ಹಾಡುಗಳು ಲಘು ಹಾಸ್ಯದಿಂದ ಕೂಡಿವೆ, ನೀತಿಪ್ರದವಾಗಿವೆ. 1927ರಲ್ಲಿ ಪ್ರಕಟವಾದ ಕಲೆಕ್ಟೆಡ್ ಅಂಡ್ ನ್ಯೂ ಪೊಯಮ್ಸ್ ಸಂಕಲನದಲ್ಲಿ ಇವನ ಉತ್ತಮ ಕವನಗಳು ಸಂಗ್ರಹವಾಗಿವೆ.

ಪ್ರಬಂಧಗಳಲ್ಲಿ ಚೆಸ್ಟರ್‍ಟನ್ನನ ವಿರೋಧಾಭಾಸದ ಶೈಲಿಯ ಚಮತ್ಕಾರವನ್ನು ಪೂರ್ತಿಯಾಗಿ ನೋಡಬಹುದು. ಇವನಿಗೆ ಅಲ್ಪದರಲ್ಲಿ ಮಹತ್ತನ್ನು ಕಾಣುವ ಒಂದು ಕಣ್ಣಿದೆ. ಬಾಳನ್ನು ವಿಲಕ್ಷಣ ರೀತಿಯಲ್ಲಿ ನೋಡುವುದೇ ಇವನ ಗುಟ್ಟು. ಅತಿ ಸಾಧಾರಣವೆಂದು ನಾವು ಭಾವಿಸುವ ಘಟನೆಗಳಲ್ಲೂ ಈತ ಸ್ವಾರಸ್ಯ, ಸೊಗಸುಗಳನ್ನು ತೆಗೆದು ತೋರಿಸುತ್ತಾನೆ. ಟ್ರೆಮಂಡಸ್ ಟ್ರೈಫಲ್ಸ್, ರನ್ನಿಂಗ್ ಆಫ್ಟರ್ ಒನ್ಸ್ ಹ್ಯಾಟ್, ದಿ ರೋಮಾಂಟಿಕ್ ಇನ್ ರೇನ್-ಮುಂತಾದ ನೂರಾರು ಪ್ರಬಂಧಗಳಲ್ಲಿ ಬಹಳ ಹಗುರವಾದ ವಿಷಯಗಳನ್ನು ತೆಗೆದುಕೊಂಡು ತನ್ನ ಕಲ್ಪನಾ ವಿಲಾಸದಿಂದ ಗಹನವಾದ ತತ್ತ್ವಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತಾನೆ. ನಿತ್ಯ ಜೀವನದ ಬೇಸರಗಳನ್ನು ರಸಘಳಿಗೆಗಳಾಗಿ ಮಾಡುವ ಶಕ್ತಿ ಇವನಿಗೆ ಒಲಿದಿದೆ. ವಿರೋಧಾಭಾಸದ ಮನೋಧರ್ಮ ನಮ್ಮನ್ನು ಗಂಭೀರ ಚಿಂತನೆಯ ಅಂತಿಮ ಘಟ್ಟಕ್ಕೆ ಕೊಂಡೊಯ್ಯುವ ಪವಾಡವನ್ನೇ ಇಲ್ಲಿ ಸಾಧಿಸಲಾಗಿದೆ. ಪ್ರತಿಯೊಂದು ಪ್ರಬಂಧದಲ್ಲೂ ಇವನ ವಿರೋಧೋಕ್ತಿಗಳಿಂದ ಕೂಡಿದ ತಿರುವುಮುರುವುಗಳು ಓದುಗರನ್ನು ದಿಗ್ಭ್ರಾಂತಗೊಳಿಸುತ್ತದೆ. ಅತ್ಯಂತ ಸತ್ಯವೆಂದು ಕಾಣುವ ತತ್ತ್ವಗಳನ್ನೆಲ್ಲ ತಿರುಮುರುಗಾಗಿ ಮಾಡುವ ಇಲ್ಲಿನ ರೀತಿ ನಿಜಕ್ಕೂ ಚಕಿತಗೊಳಿಸುವಂಥದು, ಸಾಧಾರಣ ತತ್ತ್ವಗಳ ಮೇಲೆ ಹೊಸ ಬೆಳಕನ್ನು ಬೀರಿ ಅವುಗಳ ಹೊಸ ಮುಖವನ್ನು ಇಲ್ಲಿ ತೋರಿಸಲಾಗಿದೆ. ಸವುಕಲು ತತ್ತ್ವಗಳಿಗೆ ಹೊಸಜೀವ ಕೊಡಬಲ್ಲ ಈ ಅಸಂಬದ್ಧತೆಗಳನ್ನು ಈತ ಎತ್ತಿಹಿಡಿಯುವ ರೀತಿಯಂತೂ ಮೋಹಕವಾಗಿದೆ. ಎ ಡಿಫೆನ್ಸ್ ಆಪ್ ನಾನ್‍ಸೆನ್ಸ್ (1901) ಕೃತಿಯಲ್ಲಿ ಅಸಂಬದ್ಧತೆಯ ಪ್ರತಿಪಾದನೆಯಲ್ಲಿಯೇ ಗಹನವಾದ ಸತ್ಯಗಳನ್ನು ಬೆಳಕಿಗೆ ತರಲಾಗಿದೆ. ತರ್ಕ ವಿಧಾನದಿಂದ ವಸ್ತುಗಳ ಆತ್ಮವನ್ನು ಹೊರಗೆಡಹುವುದು ಸಮುದ್ರದ ದೊಡ್ಡ ಹಡಗನ್ನು ಒಂದು ಚಿಕ್ಕ ಕೊಂಡಿಯಿಂದ ಎಳೆಯುವಷ್ಟೇ ಅಸಾಧ್ಯವೆಂಬ ಸತ್ಯವನ್ನು ಘೋಷಿಸುವ ಎರಡು ಮಹಾಸಾಂಕೇತಿಕ ಘೋಷಣೆಗಳೆಂದರೆ-ಅಬದ್ಧ (ನಾನ್ಸೆನ್ಸ್) ಮತ್ತು ಶ್ರದ್ಧೆ (ಫೇಯ್ತ್). ಇವನ ದೃಷ್ಟಿಯಲ್ಲಿ ಶ್ರದ್ಧೆಯ ಮೂಲಕ ಸತ್ಯವನ್ನು ಕಾಣುವ ಹಾಗೆಯೇ ಅಬದ್ಧದ ಮೂಲಕವೂ ಕಾಣುವುದು ಸಾಧ್ಯ. ಅದರ ಸಾಧನವಾಗಿಯೇ ಈತ ಅಪ್ರತಿಮವಾಗಿ ಬಳಸಿದ ಅಸ್ತ್ರವೆಂದರೆ ವಿರೋಧಾಭಾಸ. ಅಂತೆಯೇ ಇವನಿಗೆ ವಿರೋಧಾಭಾಸದ ಅಗ್ರಗಣ್ಯ ಎಂಬ ಬಿರುದು ಸಾರ್ಥಕನಾಮ.

ಪತ್ತೆದಾರಿ ಕಥೆಗಳು : ಚೆಸ್ಟರ್‍ಟನ್ ಬರೆದ ಪತ್ತೇದಾರಿ ರೂಪದ ಫಾದರ್ ಬ್ರೌನ್ ಕಥೆಗಳು ತುಂಬ ಜನಪ್ರಿಯವಾಗಿವೆ. ಇವನ ಕಲ್ಪನಾಶಕ್ತಿ ಈ ಕ್ಷೇತ್ರದಲ್ಲಿ ಸ್ವಚ್ಛಂದವಾಗಿ ಹರಿದಿದೆ. ದಿ ನೆಪೋಲಿಯನ್ ಆಫ್ ನಾಟಿಂಗ್ ಹಿಲ್ ಎಂಬುದು ಲಂಡನ್ನಿನ ಉಪನಗರಗಳ ನಡುವೆ ನಡೆಯುವ ಅಂತರ್ಯುದ್ಧಗಳ ಕನಸು ರೂಪದ ಕಥೆ. ಕಲೆಕ್ಷನ್ ಆಫ್ ಷಾರ್ಟ್ ಸ್ಟೋರಿಸ್ (1905); ದಿ ಮ್ಯಾನ್ ಹುವಾಸ್ ಥರ್ಸ್‍ಡೇ (1908), ದಿ ಬ್ಯಾಲಡ್ ಅಂಡ್ ದಿ ಕ್ರಾಸ್ (1910)-ಈ ಕೃತಿಗಳಲ್ಲಿ ಜೀವನತತ್ತ್ವವನ್ನು ಕಟ್ಟುಕಥೆಗಳೊಡನೆ ಹೆಣೆಯುವ ಪ್ರವೃತ್ತಿ ಹೆಚ್ಚಾಗಿ ಕಾಣುತ್ತದೆ. ಈ ಕೃತಿಗಳನ್ನು ರೂಪಕಗಳೆಂದು ಕರೆದರೂ ತಪ್ಪಾಗಲಾರದು. ಇವನ ವಿಶಿಷ್ಟ ಸಾಮಾಜಿಕ ಧೋರಣೆಗಳಿಗೆ ರೂಪುಕೊಟ್ಟಿರುವ ಅತ್ಯಂತ ಯಶಸ್ವೀ ಕಾದಂಬರಿಗಳೆಂದರೆ ಫಾದರ್ ಬ್ರೌನ್ ಕತೆಗಳು : ದಿ ಇನ್ನೊಸೆನ್ಸ್ ಆಫ್ ಫಾದರ್ ಬ್ರೌನ್, ದಿ ವಿಸ್‍ಡಮ್ ಆಫ್ ಫಾದರ್ ಬ್ರೌನ್, ದಿ ಇನ್‍ಕ್ರೆಡ್ಯುಲಿಟಿ ಆಟ್ ಫಾದರ್ ಬ್ರೌನ್, ದಿ ಸೀಕ್ರೆಟ್ ಆಫ್ ಫಾದರ್ ಬ್ರೌನ್, ದಿ ಸ್ಯ್ಕಾಂಡಲ್ ಆಫ್ ಫಾದರ್ ಬ್ರೌನ್ ಇವನು ಸೃಷ್ಟಿಸಿರುವ ಫಾದರ್ ಬ್ರೌನನ ಪಾತ್ರ ಇವನ ಕಲ್ಪನಾಶಿಶುವಾದರೂ ಇದು ಇವನ ಸ್ನೇಹಿತನಾದ ರೆವರೆಂಡ್ ಜಾನ್ ಓಕೊನಾರ್‍ನ ವ್ಯಕ್ತಿತ್ವವನ್ನು ಪ್ರತಿಫಲಿಸುತ್ತದೆ. ಈ ಕತೆಗಳಲ್ಲಿ ಪತ್ತೇದಾರಿ ನಡೆಯುವ ರೀತಿ ನೇರವಾದದ್ದು. ಫಾದರ್ ಬ್ರೌನನ ಸರಳತೆ, ಮುಗ್ಧತೆ ಮತ್ತು ಒಳದೃಷ್ಟಿಯ ಅಪೂರ್ವ ಸಂಗಮ ಇದು.

ಚೆಸ್ಟರ್‍ಟನ್ನನಲ್ಲಿದ್ದ ಇನ್ನೊಂದು ವಿಶೇಷಗುಣವೆಂದರೆ ಎಚ್.ಜಿ.ವೆಲ್ಸ್, ಬರ್ನಾಡ್ ಷಾ, ಹಿಲೇರ್ ಬೆಲಾಕ್‍ನಂಥ ವಿರುದ್ಧ ಸ್ವಭಾವಗಳ ಜನರೊಡನೆ ಗೆಳತನವನ್ನು ಬೆಳೆಸಬಲ್ಲ ಸ್ನೇಹಪರತೆ. ತನ್ನ ಬದುಕಿನ ಸುಮಾರು ಐವತ್ತು ವರ್ಷಗಳ ಕಾಲ ಈತ ಯಾವುದೇ ಪ್ರಮುಖ ಚಳವಳಿಯಲ್ಲಿಯೂ ಪರವಾಗಿ ಇಲ್ಲವೆ ವಿರುದ್ಧವಾಗಿ ಸಕ್ರಿಯವಾಗಿ ಭಾಗವಹಿಸದೆ ಇರಲಿಲ್ಲ. ರೊನಾಲ್ಡ್ ನಾಕ್ಸ್ ಚೆಸ್ಟರ್‍ಟನ್ನನನ್ನು ಕುರಿತು ಈ ಮಾತುಗಳನ್ನು ಹೇಳುತ್ತಾನೆ- ಚೆಸ್ಟರ್‍ಟನ್ನನೊಡನೆ ಹೋಲಿಸಿದರೆ ಯಾವ ವ್ಯಕ್ತಿಯಾಗಲಿ ತುಂಬಾ ಸಾಧಾರಣವಾಗಿ ಕಾಣುತ್ತಾನೆ. ಅವನ ಜೀವನ ಚರಿತ್ರೆಯನ್ನು ಓದಿದರೆ ನಮ್ಮ ಮುಂದೆ ಬಂದು ನಿಲ್ಲುವುದು ಜೀವನದ ಬಗ್ಗೆ ಗಾಢಶ್ರದ್ಧೆ, ಆಸಕ್ತಿ ಉತ್ಸಾಹಗಳನ್ನುಳ್ಳ ವ್ಯಕ್ತಿಯೊಬ್ಬನ ಚಿತ್ರ. ಜೀವನದುದ್ದಕ್ಕೂ ಐಹಿಕ ನಾಗರಿಕತೆಯ ಬೆಡಗು ಥಳುಕಿನ ವಿರುದ್ಧ ಆತ ಹೊಡೆದಾಡಿದನಲ್ಲದೆ ಸಾಧಾರಣವಾಗಿ ಲೋಕ ಮರೆಯಬಹುದಾದ ಸತ್ಯದ ಮುಖದ ಮೇಲೆ ಬೆಳಕು ಹರಿಸಿದ. ನಕ್ಕು ನಗಿಸುವುದು ಅವನ ಜೀವನಧರ್ಮವೇ ಆಯಿತು. ಅವನ ಹಾಗೆ ಗಂಭೀರವಾದ ಚಿಂತನೆಯೊಂದಿಗೆ ಉಲ್ಲಾಸದ ಲೇವಡಿಯನ್ನು ಬೆರೆಸಿದ ಲೇಖಕರು ಅತಿವಿರಳ. ಚೆಸ್ಟರ್‍ಟನ್ ತನ್ನ ಬಹುಮುಖ ಕಾರ್ಯಕ್ರಮಗಳ ನಡುವೆ ನೂರು ಗ್ರಂಥಗಳನ್ನು ರಚನೆ ಮಾಡಿದ್ದಾನೆ. ಸ್ಥೂಲಕಾಯ, ಉಡುಗೆ ನಡತೆಗಳಲ್ಲಿ ಅಚ್ಚುಕಟ್ಟಿಲ್ಲ. ಮರೆವು ಹೆಚ್ಚು. ಆದರೂ ಒಳ್ಳೆಯವ. ಹಾಸ್ಯ ಪ್ರಕೃತಿಯವ. ವಿರೋಧಾಭಾಸಗಳಲ್ಲಿ ಎತ್ತಿದ ಕೈ. ಚೆಸ್ಟರ್‍ಟನ್ ತನ್ನ ಕಾಲದ ಬಹು ಜನಪ್ರಿಯ ಲೇಖಕರಲ್ಲೊಬ್ಬನೆನಿಸಿದ್ದ.
(ಎಚ್.ಜಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ